ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.
ತುಮಕೂರು, ದಿನಾಂಕ: 29.12.2022 ವಿಚಾರ ಮಂಟಪ ಸಾಹಿತ್ಯ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರ ಜಂಟಿ ಸಹಯೋಗದಲ್ಲಿ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ "ಕುವೆಂಪು ಸಾಹಿತ್ಯದ ಸಮಕಾಲೀನತೆ" ಎಂಬ ವಿಷಯದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿಯಾದ ಧನುಷ್ ಎಚ್. ಶೇಖರ್ ರವರು "ಯಾವುದೇ ಒಂದು ಸಾಹಿತ್ಯದ ಬಹುಮುಖತ್ವದ ಸತ್ವದಿಂದಾಗಿ, ಅದರ ಅಭಿವ್ಯಕ್ತಿಯ ಗ್ರಹಿಕೆ ಪ್ರತಿಯೊಬ್ಬರಿಗೂ ಭಿನ್ನ ಭಿನ್ನವಾಗಿರುತ್ತದೆ. ಸದಾ ಬದಲಾಗುವುದು ಕಾಲ-ದೇಶಗಳ ಅಭಿರುಚಿಗಳೇ ಹೊರತು ಪಠ್ಯವಲ್ಲ. ಆದ್ದರಿಂದ ಯಾವುದೇ ಪಠ್ಯವನ್ನು ಸಮಕಾಲೀನಗೊಳಿಸುವುದು ಆ ಹೊತ್ತಿನ ಓದುಗನಷ್ಟೇ. ಈ ಮಾತಿಗೆ ಕುವೆಂಪು ಅವರ ಸಾಹಿತ್ಯವೂ ಹೊರತಲ್ಲ. ಕುವೆಂಪು ಅವರ ಸಾಹಿತ್ಯವನ್ನು ಎರಡು ಮುಖ್ಯ ನೆಲೆಗಳಿಂದ ಪ್ರಸ್ತುತ ಸನ್ನಿವೇಷಕ್ಕೆ ಅನುಸಂಧಾನಿಸಲು ಪ್ರಯತ್ನಿಸುವೆ. ಮೊದಲನೆಯದು, ಅವರ ಸ್ವಾತಂತ್ರ್ಯದ ಪರಿಕಲ್ಪನೆ. ಎರಡನೆಯದು, ಅವರ ಆಧ್ಯಾತ್ಮದ ಪರಿಕಲ್ಪನೆ. ಸ್ವಾತಂತ್ರ್ಯವೆಂಬುದು ಕೇವಲ ದೇಶಕ್ಕೆ ಯಾವುದೋ ಒಂದು ಸಮುದಾಯಕ್ಕೆ ಸಂಬಂಧಿಸಿದಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಸಂಬಂದಿಸಿದ್ದು ಎಂಬುದು ಕವಿಯ ನಿಲುವು. ಹುಟ್ಟುತ್ತಾ ವಿಶ್ವಮಾನವರಾದ ನಾವು ಬೆಳೆಯುತ್ತಾ ಅಲ್ಪಮಾನವರಾಗುವ ಪ್ರಕ್ರಿಯೆಯನ್ನು ವಿವರಿಸುತ್ತಾ, ಈ ಪ್...