ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ.
ತುಮಕೂರು, ದಿನಾಂಕ: 29.12.2022
ವಿಚಾರ ಮಂಟಪ ಸಾಹಿತ್ಯ ಬಳಗ ಮತ್ತು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಇವರ ಜಂಟಿ ಸಹಯೋಗದಲ್ಲಿ ವಿಶ್ವಮಾನವ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ "ಕುವೆಂಪು ಸಾಹಿತ್ಯದ ಸಮಕಾಲೀನತೆ" ಎಂಬ ವಿಷಯದ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಸಂಶೋಧನಾರ್ಥಿಯಾದ ಧನುಷ್ ಎಚ್. ಶೇಖರ್ ರವರು
"ಯಾವುದೇ ಒಂದು ಸಾಹಿತ್ಯದ ಬಹುಮುಖತ್ವದ ಸತ್ವದಿಂದಾಗಿ, ಅದರ ಅಭಿವ್ಯಕ್ತಿಯ ಗ್ರಹಿಕೆ ಪ್ರತಿಯೊಬ್ಬರಿಗೂ ಭಿನ್ನ ಭಿನ್ನವಾಗಿರುತ್ತದೆ. ಸದಾ ಬದಲಾಗುವುದು ಕಾಲ-ದೇಶಗಳ ಅಭಿರುಚಿಗಳೇ ಹೊರತು ಪಠ್ಯವಲ್ಲ. ಆದ್ದರಿಂದ ಯಾವುದೇ ಪಠ್ಯವನ್ನು ಸಮಕಾಲೀನಗೊಳಿಸುವುದು ಆ ಹೊತ್ತಿನ ಓದುಗನಷ್ಟೇ. ಈ ಮಾತಿಗೆ ಕುವೆಂಪು ಅವರ ಸಾಹಿತ್ಯವೂ ಹೊರತಲ್ಲ.
ಕುವೆಂಪು ಅವರ ಸಾಹಿತ್ಯವನ್ನು ಎರಡು ಮುಖ್ಯ ನೆಲೆಗಳಿಂದ ಪ್ರಸ್ತುತ ಸನ್ನಿವೇಷಕ್ಕೆ ಅನುಸಂಧಾನಿಸಲು ಪ್ರಯತ್ನಿಸುವೆ. ಮೊದಲನೆಯದು, ಅವರ ಸ್ವಾತಂತ್ರ್ಯದ ಪರಿಕಲ್ಪನೆ. ಎರಡನೆಯದು, ಅವರ ಆಧ್ಯಾತ್ಮದ ಪರಿಕಲ್ಪನೆ. ಸ್ವಾತಂತ್ರ್ಯವೆಂಬುದು ಕೇವಲ ದೇಶಕ್ಕೆ ಯಾವುದೋ ಒಂದು ಸಮುದಾಯಕ್ಕೆ ಸಂಬಂಧಿಸಿದಲ್ಲ. ಅದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವದ ವಿಕಸನಕ್ಕೆ ಸಂಬಂದಿಸಿದ್ದು ಎಂಬುದು ಕವಿಯ ನಿಲುವು. ಹುಟ್ಟುತ್ತಾ ವಿಶ್ವಮಾನವರಾದ ನಾವು ಬೆಳೆಯುತ್ತಾ ಅಲ್ಪಮಾನವರಾಗುವ ಪ್ರಕ್ರಿಯೆಯನ್ನು ವಿವರಿಸುತ್ತಾ, ಈ ಪ್ರಕ್ರಿಯೆಯಿಂದ ನಮ್ಮನ್ನು ನಾವು ಮುಕ್ತಗೊಳಿಸಿಕೊಳ್ಳಬೇಕಾದರೆ ಮೊದಲಿಗೆ ನಮ್ಮ ಸುತ್ತಾ ನಾವೇ ನಿರ್ಮಿಸಿಕೊಂಡಿರುವ ಹತ್ತು ಹಲವು ಗೋಡೆಗಳನ್ನು ಕೆಡವಬೇಕು ಮತ್ತು ಆ ಮೂಲಕವೇ ನಮ್ಮನ್ನು ಆವರಿಸಿದ ಆವರಣಗಳಿಂದ ಮುಕ್ತಿಹೊಂದಬೇಕು. ಅದು ಮನುಷ್ಯನ ನಿಜವಾದ ಸ್ವಾತಂತ್ರ್ಯವೆಂಬುದನ್ನು ಕುವೆಂಪು ಅವರ ಕೃತಿಗಳಿಂದ ತಿಳಿಯುತ್ತದೆ. ಆದರೆ ಇದು ಅಷ್ಟು ಸುಲಭಸಾಧ್ಯವಾದ ಮಾತಲ್ಲ. ಇಲ್ಲಿ, ಬದಲಾಗಬೇಕಿರುವುದು ಹೊರಗಿನ ಜಗತ್ತಲ್ಲ ಬದಲಿಗೆ ನಮ್ಮ ಒಳಗಿನ ಜಗತ್ತು. ಬದಲಾವಣೆ ಎಂಬುದು ಹೊರಗಿನಿಂದ ಒಳಗೆ ಪ್ರವೇಶಿಸುವ ಕ್ರಿಯೆಯಲ್ಲ, ಅದು ಇದಕ್ಕೆ ವಿರುದ್ಧವಾದದ್ದು. ಕುವೆಂಪು ಸಾಹಿತ್ಯ ಒತ್ತಾಯಿಸುವುದು ಈ ಬಗೆಯ ಬಿಡುಗಡೆಯನ್ನು. ಇದು ಕುವೆಂಪು ಅವರ ಪ್ರಕಾರ ನಿಜವಾದ ಸ್ವಾತಂತ್ರ್ಯ.
ಕುವೆಂಪು ಅವರು ಹಲವು ಕವಿತೆಗಳಲ್ಲಿ ಅವರ ಆಧ್ಯಾತ್ಮದ ಚಿಂತನೆ ವ್ಯಕ್ತವಾಗಿದೆ. ಆಧ್ಯಾತ್ಮಕ್ಕೆ ಸಂಬಂಧಿಸಿದ ಧ್ಯಾನ, ದೇವರು, ಕಾವಿಗಳನ್ನು ಕುವೆಂಪು ಕಂಡ ಬಗ್ಗೆ ಹೇಗೆ ಎಂಬುದು ಗಮನಾರ್ಹ. ಕುವೆಂಪು ಅವರಿಗೆ ಮತಕ್ಕಿಂತ ಮತಿಯ ಬಗೆಗೆ ಹೆಚ್ಚಿನ ಕಾಳಜಿ ಇದೆ. ಅವರ ಆಧ್ಯಾತ್ಮಕ್ಕೆ ಹೂವಯ್ಯ ಗುತ್ತಿ ಮುಂತಾದ ಪಾತ್ರಗಳನ್ನು ನಿದರ್ಶನಗಳಾಗಿ ಗಮನಿಸಬಹುದು. ಕುವೆಂಪು ಅವರ ‘ಶ್ರೀಸಾಮಾನ್ಯ’, ‘ನಿರಂಕುಶಮತಿಗಳಾಗಿ’ ಮುಂತಾದ ಲೇಖನಗಳನ್ನು ಸಹ ಈ ಹಿನ್ನೆಲೆಯಲ್ಲಿ ಬಹುಮುಖ್ಯವಾಗಿ ಗಮನಿಸಬೇಕು" ಎಂದರು.
ನಂತರದ ಸಂವಾದದಲ್ಲಿ ಗೌತಮ್ ಗೌಡ, ಶ್ರೀ ಅಶ್ವತ್ಥಪ್ಪ, ಉದಯ್ ಕಿರಣ್, ಅಮರ್ ಬಿ ಮುಂತಾದವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ಕಲಾವತಿ ಮಧುಸೂದನ ಅವರು ಕುವೆಂಪುರವರನ್ನು ಮತ್ತೆ ಮತ್ತೆ ಆಳವಾಗಿ ಓದುವ ಮೂಲಕ ಅವರ ವೈಚಾರಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಚಿಂತನೆಗಳನ್ನು ನಾವು ಅರಿಯಬಹುದು. ಡಾಂಭಿಕ ಆಚರಣೆಗಳನ್ನು ಹಾಗೂ ಧರ್ಮರಾಜಕಾರಣವನ್ನು ನಿರಾಕರಿಸುವ ಕುವೆಂಪುರವರು ವೈಚಾರಿಕ ಪ್ರಜ್ಞೆಯತ್ತ, ವಿಶ್ವಮಾನವ ಪ್ರಜ್ಞೆಯತ್ತ ನಮ್ಮನ್ನು ಕರೆದೊಯ್ಯುತ್ತಾರೆ. ಕುವೆಂಪುರವರ ಸಾಹಿತ್ಯ ಸರ್ವಕಾಲಕ್ಕೂ ಪ್ರಸ್ತುತವಾಗಿದ್ದು ಇಂತಹ ಓದು ಸಂವಾದಗಳ ಮೂಲಕ ನಾವು ಕುವೆಂಪು ಅವರಿಗೆ ಹತ್ತಿರವಾಗಬೇಕು ಎಂದು ಅಭಿಪ್ರಾಯ ಪಟ್ಟರು. ತುಮಕೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿ ಎನ್ ಎಸ್ ಗುಂಡೂರ, ಡಾ. ಗೀತ ವಸಂತ ಸೇರಿದಂತೆ ಗಂಗಲಕ್ಷ್ಮೀ, ಜಿಟಿಆರ್ ದುರ್ಗ, ಪ್ರಮೀಳಾದೇವಿ, ಅಶಾಕಿರಣ, ರಾಕೇಶ್ ಎಂ, ಗಾದಿಲಿಂಗಪ್ಪ, ಪ್ರಭುಕುಮಾರ್ ಪಿ, ಮೋಹನ್ ಕುಮಾರ್, ಗಂಗಾಧರ ಬಾಣಸಂದ್ರ, ವಿಕಾಸ್ ಕನ್ನಸಂದ್ರ, ದೇವರಾಜ್, ಮಹೇಶ್ ಕುಮಾರ್, ಭರತ್ ಕುಮಾರ್, ಛಾಯಾ ಉಪಾಧ್ಯ ಮುಂತಾದವರು ಉಪಸ್ಥಿತರಿದ್ದರು.
Comments
Post a Comment