ಬಾ. ಹ. ರಮಾಕುಮಾರಿಯವರಿಗೆ ಅಭಿನಂದನಾ ಸಮಾರಂಭ.

ತುಮಕೂರು: ಪ್ರೊ. ಎಚ್.ಜಿ. ಸಣ್ಣಗುಡ್ಡಯ್ಯ ಪ್ರಶಸ್ತಿ ಪುರಸ್ಕೃತರಾದ ನಿಮಿತ್ತ ಲೇಖಕಿ, ಸಂಘಟಕಿ, ಹೋರಾಟಗಾರ್ತಿ ಬಾ.ಹ. ರಮಾಕುಮಾರಿಯವರಿಗೆ ಅಭಿನಂದನಾ ಸಮಾರಂಭವನ್ನು ನೆರವೇರಿಸಲಾಯಿತು.
ನಗರದ ಸಾವಿತ್ರಿ ಓಶೋ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ಓದು ಲೇಖಕಿ ಬಳಗ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಬಾ.ಹ. ರಮಾಕುಮಾರಿ ಅವರ ಅಭಿನಂದನಾ ಸಮಾರಂಭದಲ್ಲಿ ಪ್ರಸ್ತಾವಿಕ ನುಡಿಗಳನ್ನಾಡಿದ ಓದು ಬಳಗದ ಸಂಚಾಲಕಿ ಆಶಾ ಬಗ್ಗನಡು ನಮ್ಮ ನಡುವಿನ ಅನನ್ಯ ವ್ಯಕ್ತಿತ್ವ ಬಾ. ಹ. ರಮಾಕುಮಾರಿಯವರದು ಜನಪರ ಕಾಳಜಿಯ ಲೇಖಕಿಯಾಗಿ, ಸಾಮಾಜಿಕ ಬದ್ಧತೆಯನ್ನು ಉಸಿರಾಡುತ್ತಾ, ದನಿ ಇಲ್ಲದವರ ದನಿಯಾಗಿ ಈ ಹೊತ್ತಿಗೂ ದಣಿವರಿಯದೆ ದುಡಿಯುತ್ತಿರುವ ಈ ಜೀವ ಒಂದು ಸೋಜಿಗವೇ ಹೌದು. ಇಂತಹ ಮಾತೃ ಹೃದಯಿ ಅಂತಃಕರಣದ ರಮಾಕುಮಾರಿಯವರನ್ನು ಅಭಿನಂದಿಸುತ್ತಿರುವ ಈ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣ ಎಂದರು.
ಕಲೇಸA ತುಮಕೂರು ಶಾಖೆಯ ಉಪಾಧ್ಯಕ್ಷರಾದ ಸಿ.ಎ. ಇಂದಿರಾ ಅವರು ಅಭಿನಂದನಾ ನುಡಿಗಳನ್ನು ಆಡುತ್ತಾ, ಸಾಹಿತಿಯಾಗಿ ಸಮಾಜ ಸೇವಕಿಯಾಗಿ ಇವರು ಮಾಡಿರುವ ಸಾಧನೆಗಳು ಒಂದೆರಡಲ್ಲ. ತಮ್ಮ ನಿರಂತರ ಹೋರಾಟದ ಮೂಲಕ ಮಹಿಳೆಯರ ಹಕ್ಕುಗಳಿಗಾಗಿ ನಿಸ್ವಾರ್ಥವಾಗಿ ಹೋರಾಡಿದವರು ರಮಾಕುಮಾರಿಯವರು. ಇವರು ಜಿಲ್ಲಾ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿ ಮಾಡಿರುವ ಸೇವೆ ಅನನ್ಯವಾದದ್ದು. ಅಲ್ಲದೇ, ತುಮಕೂರಿನಲ್ಲಿ ಲೇಖಕಿಯರ ಸಂಘವನ್ನು ಸ್ಥಾಪಿಸಿ ತುಮಕೂರಿನ ಮಹಿಳಾ ಬರಹಗಾರರಿಗೆ ನಿರಂತರ ಪ್ರೋತ್ಸಾಹವನ್ನಿತ್ತಿದ್ದಾರೆ. ಅರಿವಿನ ಪಯಣದ ಮೂಲಕ ಜಿಲ್ಲೆಯಾದ್ಯಂತ ಮಹಿಳಾ ಹಕ್ಕುಗಳ ಕುರಿತು ಜಾಗೃತಿ ಮೂಡಿಸುವಲ್ಲಿಯೂ ಇವರು ಮುಂದಾಳತ್ವ ವಹಿಸಿದ್ದರು. ನಿವೃತ್ತ ನೌಕರರ ಸಂಘದ ಅಧ್ಯಕ್ಷರಾಗಿಯೂ ಕ್ರಿಯಾತ್ಮಕ ಕಾರ್ಯಕ್ರಮಗಳನ್ನು ಇವರು ನಿರ್ವಹಿಸುತ್ತಿದ್ದಾರೆ. ಇವರ ನಿಸ್ವಾರ್ಥ ಸೇವೆಯನ್ನು ಸಮಾಜವು ತಡವಾಗಿಯಾದರೂ ಗುರುತಿಸಿ ಗೌರವಿಸುತ್ತಿರುವುದು ಸಂತೋಷದ ವಿಷಯ ಎಂದರು.   
ಲೇಖಕಿ ಡಾ. ಶೈಲಾ ನಾಗರಾಜು ಮಾತನಾಡುತ್ತಾ, ಬಾ. ಹ. ರಮಾಕುಮಾರಿಯವರು ಸಾಕಷ್ಟು ಮಂದಿ ಲೇಖಕಿಯರನ್ನು ಬೆಳೆಸಿದವರು. ಇವರ ಇಚ್ಛಾಶಕ್ತಿ ಮತ್ತು ಪ್ರಾಮಾಣಿಕತೆಗಳು ಎಲ್ಲರಿಗೂ ಮಾದರಿ. ಸಾಕಷ್ಟು ಹೋರಾಟಗಳಲ್ಲಿ ನಾವು ಜೊತೆಯಾಗಿ ಭಾಗವಹಿಸಿದ್ದೇವೆ. ಜನಮುಖಿಯಾಗಿ, ನೊಂದವರ ಪರವಾಗಿ ಹೋರಾಡುವುದನ್ನು ನಾನು ಅವರಿಂದ ಕಲಿತಿದ್ದೇನೆ. ತಮ್ಮ ಪ್ರೀತಿ ಹಾಗೂ ಕಾಳಜಿಯಿಂದಲೇ ಎಲ್ಲರನ್ನೂ ಜಯಿಸಿದವರು ರಮಾಕುಮಾರಿ. ಬಹುಮುಖಿ ಚಿಂತಕರು, ಪ್ರಗತಿಪರರು ಆಗಿರುವ ಇವರು ಸಾಕ್ಷರತಾ ಅಂದೋಲನದ ಮೂಲಕ ಜಿಲ್ಲೇಯಾದ್ಯಂತ ಕೆಲಸ ಮಾಡಿದವರು. ಸಾಹಿತ್ಯ ಮತ್ತು ಚಳುವಳಿ ಎರಡರಲ್ಲೂ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಹಲವಾರು ಕವನ ಸಂಕಲನಗಳನ್ನು, ಕೃತಿಗಳನ್ನು ರಚಿಸಿರುವ ಇವರು ಇಂದಿಗೂ ಅಷ್ಟೇ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಾ, ನೂರಾರು ಬರಹಗಾರರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯೆಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ, ತುಮಕೂರು ಜಿಲ್ಲಾ ಲೇಖಕಿಯರ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಮಹಿಳಾ ಅಧ್ಯಕ್ಷರಾಗಿ ಸಾಕಷ್ಟು ಮೊದಲುಗಳಿಗೆ ಸಾಕ್ಷಿಯಾಗಿದ್ದಾರೆ. ಯಾವುದೇ ಪ್ರಶಸ್ತಿ ಸನ್ಮಾನಗಳಿಗೆ ಆಸೆ ಪಡದೇ ನಿಸ್ವಾರ್ಥವಾಗಿ ದುಡಿದ ರಮಾಕುಮಾರಿಯಂತಹವರು ರಾಜಕೀಯಕ್ಕೂ ಬಂದು ಮಹಿಳೆಯರ ಪರ ದನಿ ಎತ್ತಬೇಕೆನ್ನುವುದು ನಮ್ಮ ಆಸೆ ಎಂದರು.  
ಕಾರ್ಯಕ್ರಮದಲ್ಲಿ ಜಲಜಾ ಜೈನ್, ಪಾರ್ವತಮ್ಮ ರಾಜಕುಮಾರ್, ಕಮಲನರಸಿಂಹ, ಸುನಂದಮ್ಮ, ಭಾರ್ಗವಿ, ಡಾ ಪ್ರಿಯಾಂಕ ಎಂ.ಜಿ., ಉಮಾದೇವಿ ಗ್ಯಾರಳ್ಳ, ಡಾ. ಶ್ವೇತ ಮಹೇಂದ್ರ, ಮರಿಯಂಬೀ ಇನ್ನಿತರರು ಇದ್ದರು.
ಫೋಟೋ ೦೧ : ತುಮಕೂರು ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ಓದು ಲೇಖಕಿ ಬಳಗ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಹಾಗೂ ಹೋರಾಟಗಾರ್ತಿ ಬಾ.ಹ. ರಮಾಕುಮಾರಿಯವರನ್ನು ಅಭಿನಂದಿಸಲಾಯಿತು.

Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ