ಉದಯೋನ್ಮುಖ ಕವಿಗಳ ಭಾವಾಭಿವ್ಯಕ್ತಿ ಕಾವ್ಯ ದೀವಿಗೆ (ಕೃತಿ ವಿಮರ್ಶೆ) - ಗೊರೂರು ಅನಂತರಾಜು, ಹಾಸನ.

ಹಾಸನದ 'ಸ್ಪಂದನ ಸಿರಿ' ಪ್ರಕಾಶನವು  'ಕಾವ್ಯದೀವಿ'ಗೆ ಕವನ ಸಂಕಲನವನ್ನು ಪ್ರಕಟಿಸುತ್ತಿದೆ. ಶ್ರೀಮತಿ ಕಲಾವತಿ ಮಧುಸೂಧನ್ ಇವರ ಸಾರಥ್ಯದ 'ಸ್ಪಂದನ ಸಿರಿ' ವೇದಿಕೆಯ ಸಾಹಿತ್ಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ, ಜೂನ್ ೨೫ ರಂದು ಈ ಕೃತಿ ಬಿಡುಗಡೆಯಾಗುತ್ತಿದೆ. 

ವರುಣ್‌ರಾಜ್ ಜಿ. ಮತ್ತು ಧನುಷ್ ಎಚ್ ಶೇಖರ್ ಇವರ ಸಂಪಾದಕತ್ವದ ಹೊಸ ತಲೆಮಾರಿನ ಉದಯೋನ್ಮುಖ ಕವಿಗಳ ೬೨ ಕವಿತೆಗಳು ಸಂಕಲನದಲ್ಲಿವೆ. 

"ಹೊಸಬರ ಬಹುತೇಕ ಚೊಚ್ಚಲ ಕವನಗಳು ಕಾವ್ಯ ತತ್ವದ ದೃಷ್ಟಿಯಿಂದಷ್ಟೇ ಅಲ್ಲ ಕಾಗುಣಿತಾದಿ ಪ್ರಾಥಮಿಕ ಭಾಷಾ ಬಳಕೆಯ ದೃಷ್ಟಿಯಿಂದಲೂ ಹತ್ತು ಹಲವು ದೋಷಗಳಿಂದ ಕೂಡಿರುತ್ತವೆ.  ಆ ಎಲ್ಲವನ್ನು ತಾಳ್ಮೆಯಿಂದ ಅವಲೋಕಿಸಿ ಆಯಾ ಕವಿಗಳ ನಿರಂತರ ಸಂಪರ್ಕದಲ್ಲಿ ಕವನಗಳನ್ನು ಭಾಷೆ ದೃಷ್ಟಿಯಲ್ಲಿ  ಒಪ್ಪ ಓರಣಗೊಳಿಸಿ ಪ್ರಕಟಿಸುವ ಸಾಹಸ ಸಂಪಾದಕರದು.  ಇದು ಸಾಹಿತ್ಯವನ್ನು ಕುರಿತು ಮೇಲಾಗಿ ಮನುಷ್ಯರು ಮತ್ತು ಅವರ ಬದುಕನ್ನು ಕುರಿತು ಆರ್ದ್ರ ಆಧ್ಯಾತ್ಮಿಕ ಪ್ರೀತಿಯಿದ್ದರಷ್ಟೇ ಸಾಧ್ಯ, ಆತ್ಮತೃಪ್ತಿಯನ್ನು ಹೊರತುಪಡಿಸಿ ಇನ್ಯಾವ ಲಾಭವನ್ನೂ  ಇಂಥ ಸಂಪಾದನ ಕೆಲಸ ನೀಡುವುದಿಲ್ಲ" ಎಂಬ ಅಮರ್ ಬಿ. ಇವರ ಮಾತು ಒಪ್ಪತಕ್ಕದ್ದೇ. 

ಇಂತಹ ಅನುಭವ ನನಗೂ ಆಗಿದೆ.  ೧೯೮೫ರಲ್ಲಿ ನಾನು ರಾಜ್ಯಾದ್ಯಂತ ನೂರು ಕವಿಗಳಿಂದ ನೂರು ಕವನಗಳನ್ನು ಸಂಗ್ರಹಿಸಿ 'ಸಮ್ಮಿಲನ' ಕೃತಿ ಪ್ರಕಟಿಸಿ, "ಯಾರೂ ದಿಡೀರ್ ಎಂದು ಲೇಖಕರಾಗುವುದಿಲ್ಲ ಬರೆಯುತ್ತಾ ಬೆಳೆಯುತ್ತಾ ಲೇಖಕರಾಗುವುದು ಅಸಾಧ್ಯವೇನಲ್ಲ" ಎಂದು ಸಂಪಾದಕೀಯದಲ್ಲಿ ಬರೆದು ಅದನ್ನು ಅರಗಿಸಿಕೊಳ್ಳಲು ಇಂದಿಗೂ ಕಾವ್ಯ ಕೃಷಿಯಲ್ಲಿ ಪ್ರಯೋಗಶೀಲನಾಗಿರುವೆ.

ಇರಲಿ 'ಕಾವ್ಯ ದೀವಿಗೆ'ಯ ತುಳಸಿದಾಸ ಸಿಂಧನೂರರ ಇರಲಿ ಬಿಡಿ ಕವಿತೆ ನೋಡಿ.
"ಇರಲಿ ಬಿಡಿ ಇದ್ದಂತೆ ಕಾರಿರುಳ ಕಾಡಂತೆ
ಮೋರಿಯೊಳಗಿನ ಹಂದಿ ನಾರುವಂತೆ..
ಉರಿಯಲಿ ಬಿಡಿ ಉರಿದಂತೆ ಮರ ಬೂದಿಯಾದಂತೆ
ಜರಿದು ಸಾಯಲಿ ಬಿಡಿ ಹೊರಡುವ ಕರಿಯಂತೆ" 

"ಪ್ರತಿಯೊಬ್ಬ ಕವಿಯೂ ತಾನು ತನಗೆ ಕಟ್ಟಿಕೊಳ್ಳುವ ಏಕಾಂತದಲ್ಲಿ ಅಂತರಂಗದ ಕಿಡಿಯ ಪಿಸು ನುಡಿಯ ಮಿಂಚನ್ನು ಹಿಡಿದು ಕವಿತೆ ಕಟ್ಟುತ್ತಾನೆ." ಎಂಬ ದಾದಾಪೀರ್ ಅವರ ಮಾತು ಸೂಕ್ತವಾದದ್ದು.  

ಧನುಷ್ ಎಚ್.ಶೇಖರ್ ಅವರ ಕವಿತೆ:  "ಈಗೀಗ ನಾನು ಮೋಡ ಕವಿದ ಬಾನಿನಲ್ಲಿ 
ತಾರೆಗಳ ಲೆಕ್ಕಾಚಾರ ನಡೆಸುತ್ತಿಲ್ಲ
ಮೌನವಾಗಿ ಕುಳಿತು ಹಳೆಯ ಹಾಡೊಂದನು ಗುನುಗುತ್ತಿಲ್ಲ
ನಿನ್ನೆ ನಡೆದ ಯುದ್ಧದಲ್ಲಿ ಸತ್ತವರ ಸಂತಾಪಕ್ಕೆ ಕರಗುತ್ತಿಲ್ಲ
ನಿತ್ಯ ಸಾಯುವವರಿಗೆ ಸಂತಾಪದ ಹಂಗಿಲ್ಲ ಬಿಡಿ" 

"ಕವಿತೆಯು ಒಳ್ಳೆಯದು, ಸಮರ್ಥವಾದದ್ದು ಎಂದೆನಿಸಿಕೊಳ್ಳಲು ಅದರ ವಸ್ತು ಹೊರ ರೂಪ ಪ್ರಾಸ ರೂಪಕಾದಿ ಅಲಂಕಾರಗಳಿಗಿಂತ ಅವರ ಧ್ವನಿಶಕ್ತಿಯೇ ಮುಖ್ಯ" ಎಂದಿರುವ ಅಮರ್ ಪ್ರಸಿದ್ಧರ ಪದ್ಯಗಳ ಜೊತೆ ಹೋಲಿಸಿ ಮುನ್ನುಡಿಯಲ್ಲಿ  ಕಾವ್ಯ  ವಿಮರ್ಶೆ ಮಾಡಿದ್ದಾರೆ.  "ಕವಿತೆ ಎಂದರೇನೆ ಕವಿಯೋದು. ಒಳಗೆ ಹೊರಗೆ ಅನುರಣಿಸುತ್ತ ವ್ಯಾಪಿಸಿಕೊಳ್ಳುವುದು. ಯಾರೋ ಬರೆದ ಕವಿತೆ ನಮ್ಮದೂ ಅನುಭವ ಅಂದಾಗ ಅದಕ್ಕೆ ಒಂದು ವ್ಯಾಪಕತೆ ಸಿಕ್ಕಿ ಭಾವ ಸಾರ್ವತ್ರಿಕಗೊಳ್ಳುವುದು" ಎಂದು ದೇವರಾಜರು ಅಭಿಪ್ರಾಯ ಪಡುವುದೂ ಸೂಕ್ತವಾಗಿದೆ. 
 
"ನಿನ್ನೊಳಗಿನ ಗುಣ ನೀ ಹುಡುಕಿಕೋ
ದುರ್ಗಣಗಳ ಹುಡ್ಕಕ ಜನ ಇದ್ದಾರಲ್ಲ..
ಹೌದಲ್ಲ..! " ನಮ್ಮ ಸದ್ಗುಣ ದುರ್ಗಣಗಳನ್ನು ಹುಡುಕಲ್ಲಿಕ್ಕೆ ನಮ್ಮ ಸುತ್ತಲೂ ಜನ ಇದ್ದಾರಲ್ಲ..! ಕವನಗಳ ಎಲ್ಲಾ ಸಾಲುಗಳನ್ನು ಓದಿ ಅರ್ಥೈಸಬೇಕಿಲ್ಲ. ಕವನಗಳ ನಡುವೆ ಇಂತಹ ಒಂದೆರಡು ಸಾಲುಗಳು ಕವನವನ್ನು ಮೆಚ್ಚುವಂತೆ ಮಾಡುತ್ತವೆ.
 ಗಂಗಾಧರ ಬಾಣಸಂದ್ರ ಅವರ
"ಕ್ಷಮಿಸುಬಿಡು ಕಂದ ನನ್ನೊಮ್ಮೆ ನೀ ಕಣ್ಣು ತೆರೆಯುವ ಮುನ್ನ 
ಮನುಷ್ಯತ್ವವಿಲ್ಲದ ನನ್ನ ನೀ ಬರುವ ಮೊದಲೇ
ನಿನಗೊಂದು ಕಾರಾಗೃಹ ಕಾದಿದೆ ನೀ ಹೆಣ್ಣೋ ಗಂಡೋ ಗೊತ್ತಿಲ್ಲ 
ಆದರೂ ಸಿದ್ಧವಾಗಿ ನಿಂತಿದೆ ಜಾತಿ ಹಣೆಪಟ್ಟಿಯೊಂದು"    
ಇಂದು ಮೆರೆಯುತ್ತಿರುವ ಜಾತಿ ಮೇಲಾಟ ರಾಜಕೀಯ ಕಾದಾಟಗಳ ಸಂಘರ್ಷದಲ್ಲಿ ಕವಿತೆ  ಸಮಾಜಮುಖಿ ಚಿಂತನೆಯಾಗಿದೆ. ಗದ್ಯ ಸಾಹಿತ್ಯದಲ್ಲಿ ಪುಟಗಟ್ಟಲೇ ಬರೆಯಬಹುದಾಗಿ   ಕಾವ್ಯ  ಕೆಲವೇ ಸಾಲುಗಳಲ್ಲಿ  ಶಶಕ್ತವಾಗಿ ಕಟ್ಟಿಕೊಡುತ್ತದೆ. 

ದೀಪಕಾ ಮರಳೂರರ ಕವಿತೆ:
"ಅವಳು ಒಂದು ಹೆಣ್ಣಲ್ಲವೇ ಅವಳಿಗೂ ಮನಸ್ಸಿಲ್ಲವೇ
ಭಾವನೆಗಳ ಕಿತ್ತೆಸೆದು ಕೊಂದುಬಿಟ್ಟರು
ಸುಟ್ರು ಅವಳ ಅಂತರಂಗವನ್ನ
ಸಾಧನೆಯ ಮನೋಭಾವವನ್ನೇ ಕಸಿದುಬಿಟ್ಟರು"  
 ಒಂದು ಕವಿತೆ ನಾನಾ ಅರ್ಥಗಳಲ್ಲಿ ಧ್ವನಿಸುತ್ತದೆ. ಅದರ ಗೂಢರ್ಥ ಭಾವರ್ಥಗಳನ್ನು ನಾವು ನಮ್ಮ ವಿಚಾರಕ್ಕೆ ಅನ್ವಯಿಸಿ ವ್ಯಾಖ್ಯಾನಿಸುವುದಕ್ಕಿಂತ ಓದುಗರ ಅರ್ಥೈಸುವಿಕೆಗೆ ಬಿಡುವುದೇ ಸೂಕ್ತ. 

ಈ ಕೃತಿ ವಿಚಾರ ಮಂಟಪ ಬಳಗದ ಹೊಸ ತಲೆಮಾರಿನ ಕವಿಗಳ ಸಂಪಾದಿತ ಕವನ ಸಂಕಲನ. ಕಾಲ ಮುಂದುವರೆದಂತೆ ಅಭಿವ್ಯಕ್ತಿಯ ಮಾಧ್ಯಮವು ಬದಲಾಗುತ್ತಿದೆ. ನಮ್ಮ ಕಾಲಘಟ್ಟದಲ್ಲಿ ನಮ್ಮ ಕವಿತೆ ಬರಹಗಳು ಪತ್ರಿಕೆಗಳ ಮೂಲಕವೇ ಓದುಗರಿಗೆ ತಲುಪಬೇಕಿತ್ತು. ಇಂದು ವ್ಯಾಟ್ಸಪ್ ಫೇಸ್‌ಬುಕ್, ಯೂ ಟ್ಯೂಬ್‌ಗಳು ಅಭಿವ್ಯಕ್ತಿಗೆ  ಅವಕಾಶ ತೆರೆದಿಟ್ಟಿವೆ. ಈ ದಿಶೆಯಲ್ಲಿ ವಿಚಾರ ಮಂಟಪ ಬಳಗ ಕಲಿಕೆಯಲ್ಲಿ ಆಸಕ್ತಿ ಇರುವ ಕಿರಿಯರಿಗೆ ಸೂಕ್ತ ವೇದಿಕೆಯಾಗಿ  ಹೊಸ ಓದು ಬರಹಗಳಿಗೆ ಪ್ರೋತ್ಸಾಹಿಸಿದೆ. ಚಂದನ್ ಗುರುತಿಸಿದಂತೆ "ಇಲ್ಲಿನ ಕವನಗಳು ಮೈಮನಗಳ ತುಮುಲಗಳಿಂದ ಹಿಡಿದು ಸಮಕಾಲೀನ ಸಾಮಾಜಿಕ ರಾಜಕೀಯ ವಿದ್ಯಮಾನಗಳವರೆಗಿನ ಹತ್ತು ಹಲವು ವಿಚಾರಗಳಿಗೆ ಪ್ರತಿಕ್ರಿಯಿಸಿದೆ. ಪ್ರಾಥಮಿಕ ಬರಹಗಳಿಂದ ಹಿಡಿದು ಹಲವು ಸೂಕ್ಷ್ಮ ಹಾಗೂ ಸಂವೇದನಾಶೀಲ ಕವನಗಳನ್ನೂ ಒಳಗೊಂಡಿದೆ. ಓದುಗರಿಗೆ ಹಲವು ಭಾವ ಜಗತ್ತಿನ ದರ್ಶನ ಮಾಡಿಸಿದೆ". ಸಂಪಾದಕರ ಹಾಗೂ ಎಲ್ಲಾ ಕವಿಗಳ ಶ್ರಮಕ್ಕೆ ಅಭಿನಂದನಾರ್ಹವಾದದ್ದು, ಕನ್ನಡ ಓದುಗ ವಲಯ ಈ ಕೃತಿಯನ್ನು ಆದರದಿಂದ ಸ್ವಾಗತಿಸಲಿ. ಶುಭಾಶಯಗಳು. 

ಪ್ರತಿಗಳಿಗಾಗಿ ಸಂಪರ್ಕಿಸಿ : 9448241450

- ಗೊರೂರು ಅನಂತರಾಜು, ಹಾಸನ.


Comments

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ