ಬೌದ್ಧ ತಾತ್ವಿಕತೆ ಆಚರಣೆಯಲ್ಲ ಅದೊಂದು ಬದುಕಿನ ಮಾರ್ಗ ; ಡಾ. ನಟರಾಜ ಬೂದಾಳ್ ಅಭಿಮತ
ತುಮಕೂರು: ಬೌದ್ಧ ತಾತ್ವಿಕತೆ ಕೇವಲ ಜ್ಞಾನ ಮಾರ್ಗವಲ್ಲ, ಅದು ಅನುಸಂಧಾನದ ಮಾರ್ಗ. ಅದು ಪಾಂಥಿಕತೆ, ಆಚರಣೆಗಳು, ವಿಧಿ-ನಿಷೇಧಗಳಲ್ಲಿ ಇಲ್ಲ. ಸದಾ ಎಚ್ಚರದಿಂದ ಬದುಕುವುದರಲ್ಲಿದೆ ಎಂದು ಲೇಖಕ ಡಾ ನಟರಾಜ್ ಬೂದಾಳ್ ಅಭಿಪ್ರಾಯಪಟ್ಟರು.
ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಶುಕ್ರವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು, ಓದು ಲೇಖಕಿ ಬಳಗ, ವಿಚಾರ ಮಂಟಪ ಬಳಗ ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ಬುದ್ಧ ಪೂರ್ಣಿಮೆಯ ಪ್ರಯುಕ್ತ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬುದ್ಧನ ತಾತ್ವಿಕತೆ ನಮ್ಮೊಳಗೆ ಇದೆ. ಅದು ಹೊರಗಿಂದ ಕೇಳಿ ದಕ್ಕಿಸಿಕೊಳ್ಳಬೇಕಾದ ಸಂಗತಿ ಅಲ್ಲ. ಬುದ್ಧನ ಕಡೆಯ ಮಾತು ‘ನಿನಗೆ ನೀನೇ ಬೆಳಕು’ ಎಂಬುದು. ಇದೇ ಬೌದ್ಧ ತಾತ್ವಿಕತೆಯ ಬಹುದೊಡ್ಡ ಅಂಶ. ಹುಟ್ಟಿನಿಂದ ಎಲ್ಲರೂ ಬುದ್ಧರೆ. ಬೌದ್ಧ ದರ್ಶನವನ್ನು ಬಾಳುವುದೆಂದರೆ ತಪ್ಪಾಗಿ ಬಾಳದೇ ಇರುವುದು ಅಷ್ಟೇ ಎಂದರು.ಕರ್ನಾಟಕ ಲೇಖಕಿಯರ ಸಂಘದ ಅಧ್ಯೆಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ ಬುದ್ದನ ಚಿಂತನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಹೇಗೆ ಎಂಬುದು ನಮ್ಮ ಮುಂದಿರುವ ಪ್ರಶ್ನೆ. ನಮ್ಮ ನಡುವೆ, ನಮ್ಮೊಳಗೇ ಇರುವ ಬುದ್ಧನನ್ನು ಅರಿಯುವುದು ಇಂದಿನ ತುರ್ತು ಎಂದರು.
ಕಾರ್ಯಕ್ರಮದಲ್ಲಿ ಕಥೆೆಗಾರ ಮಿರ್ಜಾ ಬಷೀರ್, ಕಾರ್ಯಕ್ರಮದ ಸಂಚಾಲಕಿ ಡಾ ಆಶಾರಾಣಿ ಬಗ್ಗನಡು, ಡಾ. ನಾಗಭೂಷಣ ಬಗ್ಗನಡು, ಡಾ. ಗೀತಾ ವಸಂತ, ಡಾ ಪ್ರಿಯಾಂಕ ಎಂ. ಜಿ., ಮರಿಯಂಬೀ, ಧನುಷ್ ಎಚ್, ಶೇಖರ್, ಅಮರ್ ಬಿ, ರಂಗಸ್ವಾಮಿ ಎಚ್, ಅರವಿಂದ ಈ, ನವೀನ್ ಕುಮಾರ್ ಇನ್ನಿತರರು ಇದ್ದರು.
Comments
Post a Comment