ಯಶಸ್ವಿಯಾದ ಶ್ರೀ ಜಿ.ಎಸ್. ಶಿವರುದ್ರಪ್ಪನವರ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಲಾಗಿದ್ದ ಕವಿಗೋಷ್ಠಿ ಕಾರ್ಯಕ್ರಮ - ವಿಚಾರ ಮಂಟಪ ಸಾಹಿತ್ಯ ಬಳಗ

ದಿನಾಂಕ 06.02.2022 ರಂದು ಗೂಗಲ್ ಮೀಟ್ ಮೂಲಕ ವಿಚಾರ ಮಂಟಪ ಸಾಹಿತ್ಯ ಬಳಗದ  ವತಿಯಿಂದ, ಸ್ಪಂದನ ಸಿರಿ ವೇದಿಕೆ- ಕರ್ನಾಟಕ ಇವರ ಸಹಯೋಗದಲ್ಲಿ 
ರಾಷ್ಟ್ರಕವಿ ಜಿ. ಎಸ್. ಶಿವರುದ್ರಪ್ಪನವರ  ಜಯಂತಿಯ ಅಂಗವಾಗಿ ಆನ್ಲೈನ್  ಕವಿಗೋಷ್ಠಿ
ಮತ್ತು ಜಿ.ಎಸ್.ಶಿವರುದ್ರಪ್ಪನವರ ಕವಿತೆಗಳ ವಾಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ಪ್ರಾರಂಭದಲ್ಲಿ ಇಂದು ನಮ್ಮನ್ನಗಲಿದ ಲತಾ ಮಂಗೇಶ್ಕರ್ ಅವರ ಜೀವನ ಸಾಧನೆಗಳನ್ನು  ವಿವರಿಸುತ್ತಾ ಶ್ರೀ ರಾಕೇಶ್ ಎಂ. ರವರು ಲತಾಮಂಗೇಶ್ಕರ್ ಅವರಿಗೆ  ನುಡಿನಮನವನ್ನು ಸಲ್ಲಿಸಿದರು. ಮತ್ತು ಅವರ ಆತ್ಮಶಾಂತಿಗಾಗಿ ೨ ನಿಮಿಷದ ಮೌನಾಚರಣೆಯನ್ನು ಮಾಡಲಾಯಿತು. 

ಶ್ರೀ ವಿಕಾಸ್ ಕನ್ನಸಂದ್ರ ರವರು ನೆರೆದಿದ್ದವರನ್ನು ಪ್ರೀತಿಯಿಂದ ಸ್ವಾಗತಿಸಿದರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಜಿ.ಟಿ.ಆರ್. ದುರ್ಗ, ಶಿಕ್ಷಕರು, ಬಂಗಾರಪೇಟೆ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಶಿವರುದ್ರಪ್ಪನವರ ಹಿರಿಮೆ ಗರಿಮೆಗಳನ್ನು ವಿವರಿಸಿ ಕನ್ನಡ ಸಾಹಿತ್ಯವನ್ನು ಬೆಳಗಿಸಿದ ಅದ್ಬುತ ಪ್ರತಿಭೆ ಶಿವರುದ್ರಪ್ಪನವರ ಹಾಗೂ ಎಲ್ಲಾ ಕನ್ನಡದ ಸಾಹಿತಿಗಳನ್ನು ನಾವು ಪ್ರತಿದಿನವೂ ನೆನೆಯುತ್ತಲೇ ಇರಬೇಕು. ಹಾಗೂ ಅವರು ಹಾಕಿಕೊಟ್ಟ ಹಾದಿಯಲ್ಲಿ ಸಾಗಬೇಕು. ಎಲ್ಲ ಕವಿ ಬರಹಗಾರರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವ ಕೆಲಸ ನಮ್ಮಿಂದ ಆಗಬೇಕಿದೆ. ಇಂತಹಾ ಅವಕಾಶವನ್ನು ನೀಡುತ್ತಿರುವ ಬಳಗಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುವೆ ಎಂದು ಹೇಳುತ್ತಾ  ಶಿವರುದ್ರಪ್ಪನವರ ಕವನ ವಾಚನ‌ ಮಾಡುವ ಮೂಲಕ ತಮ್ಮ ಮಾತನ್ನು ಮುಗಿಸಿದರು.  

ಕಾರ್ಯಕ್ರಮದಲ್ಲಿ ಜಯಂತಿ ಕನ್ನುಕೆರೆ, ಎಂ. ಜಿ. ಶಾಸ್ತ್ರೀ, ಕುಮಟ, ಮಲ್ಲಿಕಾರ್ಜುನ ಎಸ್. ಆಲಮೇಲ, ಯಡ್ರಾಮಿ, ಕಾಡಪ್ಪ ಮಾಲಗಾಂವಿ, ಶಿರೋಳ,  ಸುರೇಶ್ ಕುಮಾರ್ ಬಿ. ಸಿ, ಶಿಲ್ಪ ಜಗದೀಶ್, 
ಪೂರ್ಣ ಗೌಡ, ಎಂ. ರಮಿತಾ, ಎ. ಬೈಂದೂರು ಪಡುವರಿ, ಪೂರ್ಣಿಮ ಭಗವಾನ್, ಸಿ.ಎಚ್. ನಾಗೇಂದ್ರಪ್ಪ, 
ಗೌರಿ ಶಂಕರಚಟ್ಟಿ, ಸವಿತಾ ಅಂಗಡಿ, 
ಸುರೇಶ್ ಕುಮಾರ್, ವೈಷ್ಣವಿ. ಪುರಾಣಿಕ್, ದೇವೇಂದ್ರಪ್ಪ. ಕೆ. ಕುಂಚಿಗನಾಳ್ ಮುಂತಾದವರು ಭಾಗವಹಿಸಿ ಸ್ವರಚಿತ ಕವನಗಳನ್ನು ವಾಚನ ಮಾಡಿದರು.  ಗೌತಮ್ ಗೌಡ, ಸೋಮೇಶ್ ಪ್ರಚಂಡಿ, ವಿಕಾಸ್, ಕನ್ನಸಂದ್ರ, ಶಿವಮೂರ್ತಿ ಕೆ, ಶ್ರೀಮತಿ ಕಲಾವತಿ ಮಧುಸೂದನ ಮುಂತಾದವರು ಜಿ.ಎಸ್.ಶಿವರುದ್ರಪ್ಪನವರ ಕವನಗಳನ್ನು ವಾಚನ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀಮತಿ ಕಲಾವತಿ ಮಧುಸೂದನ, ಅಧ್ಯಕ್ಷರು, ಸ್ಪಂದನ ಸಿರಿ ಸಾಹಿತ್ಯ ವೇದಿಕೆ ಇವರು ಇಂದು ನಮ್ಮನ್ನಗಲಿದ ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರು ಹಾಡಿದ 'ಓ ನನ್ನ ದೇಶ ಭಾಂಧವರೆ' ಎಂಬ ಹಾಡನ್ನು ಹಾಡುವ ಮೂಲಕ ಬಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. 

ಕಾರ್ಯಕ್ರಮದಲ್ಲಿ ದೇಶ ಭಕ್ತಿ, ವಿವೇಕಾನಂದರು, ರಾಮಕೃಷ್ಣರು, ಶಿವರುದ್ರಪ್ಪನವರು, ಪ್ರಕೃತಿಯ , ಭೀಮಸೇನ ಜೋಷಿಯವರು , ಅಪ್ಪನ ಪ್ರೀತಿಯ, ಬಸವಣ್ಣನವರ  ಹೀಗೆ ಹಲವು ವೈವಿಧ್ಯಮಯ ವಾದ ವಿಷಯಗಳ ಕುರಿತಾದ  ಕವನಗಳನ್ನು ಸು. ೨೦ ಕ್ಕೂ ಹೆಚ್ಚು ಜನ  ಕವಿಗಳು ವಾಚಿಸಿದರು. ಸಂದೇಶ ಪೂರ್ಣ ಅರ್ಥಪೂರ್ಣ ಹಾಗೂ ವಿಚಾರ ಪೂರ್ಣವಾದ ಕವಿತೆಗಳನ್ನು ಇಂದು ಕೇಳುವ ಅವಕಾಶ ಇಲ್ಲಿ ನಮ್ಮಗೆ ದೊರೆಯಿತು. ಬಹಳ ಖುಷಿಯೆನಿಸಿತು.

ಕನ್ನಡ ಸಾಹಿತ್ಯ ಲೋಕಕ್ಕೆ ಭಾವದಲೆಗಳ ಸರದಾರ ಜಿ.ಎಸ್.ಶಿವರುದ್ರಪ್ಪನವರ ಕೊಡುಗೆ ಅಪಾರವಾದದ್ದು. ಇವರನ್ನು ನಾವು ಎಂದೆಂದಿಗೂ ಸ್ಮರಿಸಿಕೊಳ್ಳಬೇಕಿದೆ. 

ಕಾಣದ ಕಡಲಿಗೆ ಹಂಬಲಿಸಿದೆ ಮನ ಎಂಬ ಕಾಲನ ಕರೆಯ ವಾಸ್ತವದ ಚಿತ್ರಣವನ್ನ‌ ಜನಮಾನಸದಲ್ಲಿ ಅರ್ಥಪೂರ್ಣತೆಯ ಗೀತೆಯ ರೂಪದಲ್ಲಿ ಉಳಿಸಿರುವ ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪನವರು ಇದೇ ಪೆಭ್ರವರಿ ೦೭.೧೯೨೬ ರಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಈಸೂರಿನಲ್ಲಿ ಜನಿಸುವರು. ಇವರ ತಂದೆಯಿಂದ ಬಂದ ಸಾಹಿತ್ಯದ ಗೀಳು ಇವರನ್ನು ರಾಷ್ಟ್ರಕವಿಯನ್ನಾಗಿ ಮಾಡುತ್ತದೆ. ಜಿ.ಎಸ್.ಎಸ್. ಎಂದೇ ಜನಪ್ರಿಯರಾಗಿ ಕನ್ನಡದ ಜನಮಾನಸದಲ್ಲಿ ಸದಾ ಭಾವದಲೆಯ ಸಂಗೀತವಾಗಿ ನೆಲೆಸಿರುವ ಇವರು ಉತ್ಕೃಷ್ಟ ಕವಿ, ಪ್ರಬುದ್ಧ ವಿಮರ್ಶಕ, ಸಂಪಾದಕ, ಸಂಶೋದಕ, ನಾಟಕಕಾರ, ದಕ್ಷ ಚಾಣಕ್ಷ, ಚತುರ ಆಡಳಿತಗಾರ, ಶ್ರೇಷ್ಟ ಸಂಘಟಕ, ಕನ್ನಡದ ಹಿತಜೀವಿ, ಕನ್ನಡದ ಮಾನವತಾವಾದಿ ಉತ್ತವ ಪ್ರಾಧ್ಯಾಪಕರು ಹೀಗೆ ಬಹುಮುಖಿ ವ್ಯಕ್ತಿತ್ವದವರು.
ಗೋವಿಂದ ಪೈ ಕುವೆಂಪು ಅವರ ನಂತರ  ನವೆಂಬರ್ ೧ ೨೦೦೬ ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು  ರಾಷ್ಟ್ರಕವಿಯ ಗೌರವಕ್ಕೆ ಪಾತ್ರರಾದವರು. ಬಡತನದ ಕಾರಣದಿಂದ ಹತ್ತನೇ ತರಗತಿಯ ನಂತರ ಗುಮಾಸ್ತರಾಗಿ ಕಾರ್ಯನಿರ್ವಹಿಸುತ್ತಾ ನಂತರ ಬಿ.ಎ. ಹಾನರ್ಸ್ ಪದವಿ, ನಂತರ ಮೂರು ಸುವರ್ಣ ಪದಕಗಳೊಂದಿಗೆ ಎಂ.ಎ ಪದವಿಯನ್ನು ಪಡೆಯುತ್ತಾರೆ. ೧೯೫೫ ರಲ್ಲಿ ಭಾರತ ಸರ್ಕಾರದ ಸಂಶೋಧನಾ ಶಿಷ್ಯವೇತನದ ಸಹಾಯದಿಂದ ಕುವೆಂಪುರವರ ಮಾರ್ಗದರ್ಶನದಲ್ಲಿ 'ಸೌಂದರ್ಯ ಸಮೀಕ್ಷೆ'  ಎಂಬ ಪ್ರೌಡ ಪ್ರಬಂಧಕ್ಕೆ ಡಾಕ್ಟರೇಟ್ ಪದವಿಯನ್ನು ಪಡೆಯುತ್ತಾರೆ. 

ಕುವೆಂಪು, ಎ.ಆರ್‌.ಕೃಷ್ಣಶಾಸ್ತ್ರಿ, ಎಲ್.ನರಸಿಂಹಾಚಾರ್, ತ.ಸು ಶಾಮರಾಯರು,  ಜಿ.ಪಿ.ರಾಜರತ್ನಂ, ತಿ.ನಂ.ಶ್ರೀ ಇಂತಹ ಅತೀರಥ ಮಹಾರಥರ  ಒಡನಾಟದಲ್ಲಿ ಬಹುಮುಖ ಪ್ರತಿಭೆಯಾಗಿ, ವೈಚಾರಿಕ ಪ್ರಗತಿಪರ ಚಿಂತಕರಾಗಿ, ನಾಡು ಕಂಡ ಶ್ರೇಷ್ಠ ವಿಮರ್ಶಕರಾಗಿದ್ದವರು ಮತ್ತು  ಸಾಂಸ್ಕೃತಿಕವಾಗಿ ಶೈಕ್ಷಣಿಕವಾಗಿ ಆಳವಾದ ಅಧ್ಯಾಯನ, ಅಧ್ಯಾಪನಗಳಲ್ಲಿ ತೊಡಗಿಸಿಕೊಂಡಿದ್ದವರು ಶಿವರುದ್ರಪ್ಪನವರು. 

ಸಂಸ್ಕೃತಿಯ ಚಲನಶೀಲತೆಗೆ ನಿರಂತರ ಕೊಡುಗೆಯನ್ನು ನೀಡಿದವರು. ಮೌಡ್ಯತೆಯನ್ನು ಹೋಗಲಾಡಿಸುವಲ್ಲಿ, ಮೌಲ್ಯಗಳನ್ನು ಎತ್ತಿಹಿಡಿಯುವಲ್ಲಿ ನಿರತರಾದವರು. ವರ್ತಮಾನದಲ್ಲಿ ನಿಂತು ಭೂತ ಭವಿಷ್ಯತ್ತುಗಳೊಂದಿಗೆ ಅನುಸಂಧಾನ ನಡೆಸಿ ಮುಕ್ತ ಪ್ರಜ್ಞೆಯ ನೇರ ನಡೆಯ ವಿಚಾರ ಪರ ಸರಳ ಜೀವಿಯ ಕೆಲವು ಸಾಲುಗಳು ಸದಾ ಸ್ಮರಣೀಯ. 

ಇಂತಹಾ ಕೆಲವು ಸ್ಮರಣೀಯ ಕವಿತೆಗಳು ಹಲವು ಚಿತ್ರಗೀತೆಗಳಾಗಿ ಭಾವಗೀತೆಗಳಾಗಿ ಸಂಗೀತಕ್ಕೆ ಒಳಪಟ್ಟು ಕೇಳುಗರ ಮನರಂಜಿಸುವ ಕೆಲಸ ಮಾಡಿವೆ. ಇಂತಹಾ ಕೆಲವು ಕವನಗಳಲ್ಲಿ 'ಹಣತೆ ಹಚ್ಚುತ್ತೇನೆ ನಾನು', 'ಕಾಣದ ಕಡಲಿಗೆ ಹಂಬಲಿಸಿದೆ ಮನ', 'ಎಲ್ಲೋ ಹುಡುಕಿದೆ ಕಾಣದ ದೇವರ', 'ಪ್ರೀತಿ ಇಲ್ಲದ ಮೇಲೆ', 'ನೀನು ಮುಗಿಲು ನಾನು ನೆಲ ಒಲವೇ ನಮ್ಮ ಬಲ', 'ಎದೆ ತುಂಬಿ ಹಾಡಿದೆನು ಅಂದು ನಾನು', 'ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ಸಲಹಿದಾಕೆ ನಿನಗೆ ಬೇರೆ ಹೆಸರು ಬೇಕೆ ?', 'ಮುಂಗಾರಿನ ಅಭಿಷೇಕಕೆ ಮಿದುವಾಗಿದೆ ನೆಲವು', 'ಹಾಡು ಹಳೆಯದಾದರೇನು? ಭಾವ ನವನವೀನ', 'ವೇದಾಂತಿಯೊಬ್ಬ ಹಾಡಿದನು',  'ಬೆಳಗು ಬಾ ಹಣತೆಯನ್ನು'  ಮುಂತಾದವು ಚಿರಸ್ಮರಣೀಯ. 

 ಹೀಗೆ ಇವರ ಭಾವ ದೀಪ್ತಿ ಸುಲಲಿತವಾಗಿ ಸಂಬಂಧಗಳನ್ನು ಮೌಲ್ಯಗಳನ್ನು‌ ಕಟ್ಟಿಕೊಡುವ ನಿಟ್ಟಿನಲ್ಲಿ ಸಾಗುತ್ತಾ ಸಹೃದಯರನ್ನ ಮೃದುವಾಗಿ ನೇವರಿಸಿ ತನ್ಮಯಿಸುತ್ತಾ ಭಾವದಲೆಗಳ ಸರದಾರರಾಗಿ ಸಹೃದಯರ ಹೃದಯಗಳಲ್ಲಿ ರಾರಾಜಿಸಿದ್ದಾರೆ ಜಿ.ಎಸ್.ಎಸ್.

 ಇವರು ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದು ಇವುಗಳಲ್ಲಿ ಸೂವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಪಂಪ, ನಾಡೋಜ, ನೃಪತುಂಗ ಪ್ರಶಸ್ತಿಗಳು ಸೇರಿದಂತೆ ಕೇಂದ್ರ ಮತ್ತು ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಪ್ರಮುಖವಾದವು. ಇವರ ಸಾಹಿತ್ಯಿಕ, ಶೈಕ್ಷಣಿಕ ಸೇವೆ. ನಾಡುನುಡಿಗಾಗಿ ಮಾಡಿದ ಚಳುವಳಿಗಳು  ಇವರ ಸಮಾಜಪರ ಚಿಂತನ ನಮ್ಮೆಲ್ಲರಿಗೂ ಆದರ್ಶ.

ಸಾಹಿತಿಗಳು ಎಂದರೆ ಸಹ ಹೃದಯಿಗಳು, ಮತ್ತೊಬ್ಬ ಕವಿಯ ಸಾಹಿತ್ಯವನ್ನು ಓದುವ ಸಹೃದಯತೆ ನಮಗೆ ಬೇಕು. ಮತ್ತೊಬ್ಬರ ಬರಹಕ್ಕೆ ಸ್ಪಂದಿಸುವುದು ಸಹಾ ಕವಿಯೊಬ್ಬನ ಮುಖ್ಯ ಲಕ್ಷಣವಾಗಿದೆ. ಇಂತಹಾ ಕೆಲಸವನ್ನು ಮಾಡುತ್ತಿರುವ ವಿಚಾರ ಮಂಟಪ ಸಾಹಿತ್ಯ ವೇದಿಕೆಯ ಎಲ್ಲ ಸದಸ್ಯರಿಗೂ ಮತ್ತು ಕವನ ವಾಚನ ಮಾಡಿದ ಎಲ್ಲಾ ಕವಿಗಳಿಗೆ ಅಭಿನಂದನೆಗಳು ಎಂದು ಹೇಳುತ್ತಾ ತಮ್ಮ ಮಾತನ್ನು ಮುಗಿಸಿದರು.

ಶ್ರೀ ಗೌತಮ್ ಗೌಡ, ವರುಣ್ ರಾಜ್ ಜೀ, ಶ್ರೀ ಮಂಜುನಾಥ ಗಣಪತಿ ಹೆಗಡೆ, ದೇವೇಂದ್ರಪ್ಪ, ಗೌರಿಶಂಕರ್, ಎಚ್.ಎಂ. ರಾಮಚಂದ್ರ, ವಿಕಾಸ್ ಕನ್ನಸಂದ್ರ, ರಜನಿಕಾಂತ್ ಎಚ್.ಪಟಗಾರ, ರಾಕೇಶ್ ಎಂ ಮುಂತಾದವರು ಹಾಗೂ ಸ್ಪಂದನ ಸಿರಿ ಸಾಹಿತ್ಯ ವೇದಿಕೆ ಮತ್ತು ವಿಚಾರ ಮಂಟಪ ಸಾಹಿತ್ಯ ಬಳಗದ ಎಲ್ಲಾ ಗೌರವ ಸದಸ್ಯರು ಮತ್ತು ಪಧಾದಿಕಾರಿಗಳು, ವಿಚಾರ ಮಂಟಪ ಪುಸ್ತಕ ಓದು - ಸಂವಾದ ಬಳಗದ ಸದಸ್ಯರು, ಮತ್ತು ಎಲ್ಲಾ ಸಾಹಿತ್ಯಾಸಕ್ತ, ಕವಿ, ಸಹೃದಯ ಮಿತ್ರರು ಹಾಜರಿದ್ದರು.


ವರದಿ - ಗೌತಮ್ ಗೌಡ.

Comments

  1. ಕಾರ್ಯಕ್ರಮ ಹಾಗೂ ವರದಿ ತುಂಬ ಚೆನ್ನಾಗಿ ಮೂಡಿಬಂದಿದೆ.ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು.🙏💐

    ReplyDelete
  2. ಅದು ಹೇಗೆ ಸರ್ ಇಷ್ಟು ಕರಾರುವಾಕ್ಕಾಗಿ ವರದಿಯನ್ನು ಸಿದ್ಧಪಡಿಸುವಿರಿ.ಅತ್ಯುತ್ತಮ ವರದಿ ಸರ್.ಅಚ್ಚರಿ ಮೂಡಿಸುತ್ತದೆ.ತಮ್ಮ ವರದಿಯ ಪರಿ.ಅಭಿನಂದನೆಗಳು ಸರ್👌👍🙏

    ReplyDelete
  3. ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬಂದಿತ್ತು.ವರದಿಯನ್ನೂ ಅತ್ಯಂತ ಚೆನ್ನಾಗಿ ಮಾಡಿದ್ದೀರಿ.ಹಾರ್ದಿಕ ಧನ್ಯವಾದಗಳು.

    ReplyDelete
    Replies
    1. ಎಂ.ಜಿ.ಶಾಸ್ತ್ರಿ.9448933188

      Delete

Post a Comment

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ