ಯಶಸ್ವಿಯಾಗಿ ನಡೆದ ಪುಸ್ತಕ ಓದು - ಸಂವಾದ ಸರಣಿ ೦೨ ಕಾರ್ಯಕ್ರಮ - ವಿಚಾರ ಮಂಟಪ ಸಾಹಿತ್ಯ ಬಳಗ.

ದಿನಾಂಕ : ೩೦. ೦೧. ೨೦೨೨
ವಿಚಾರ ಮಂಟಪ ಸಾಹಿತ್ಯ ಬಳಗ, ಕರುನಾಡ ಸಾಹಿತ್ಯ ಪರಿಷತ್ತು, ಸ್ಪಂದನಸಿರಿ ಸಾಹಿತ್ಯ ವೇದಿಕೆ ಮತ್ತು ತನುಶ್ರೀ ಪ್ರಕಾಶನ ಸಂಸ್ಥೆ ಇವರ ಜಂಟಿ ಸಹಯೋಗದಲ್ಲಿ ಆನ್ ಲೈನ್ ಗೂಗಲ್ ಮೀಟ್ ಮೂಲಕ  ಪುಸ್ತಕ ಓದು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. 
ರಾಜ್ ಕುಮಾರ್ ವಿ. ಕೋಲಾರ ಇವರು ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮತ್ತು ರಾಕೇಶ್ ಎಂ. ಶಿಕ್ಷಕರು, ಬೆಂಗಳೂರು ಇವರು ಪುಸ್ತಕ ಓದು ಸಂವಾದ ಸರಣಿ ೦೧ ಕಾರ್ಯಕ್ರಮದ ಮುಖ್ಯಾಂಶಗಳನ್ನು, ಪುಸ್ತಕ ಓದಿನ ಮಹತ್ವ, ಪುಸ್ತಕ ಓದಿಗೆ ಪ್ರೇರೇಪಿಸುವ ಇಂತಹಾ ಕಾರ್ಯಕ್ರಮಗಳ ಮಹತ್ವ ಇತ್ಯಾದಿ ವಿಚಾರಗಳನ್ನು ವಿಷದಪಡಿಸಿದರು. ಶ್ರೀ ಶಿವಮೂರ್ತಿ ಕೋಡಿಹಳ್ಳಿ ಅವರು ಕಾರ್ಯಕ್ರಮದ ನಿರೂಪಣೆ ಮತ್ತು ನಿರ್ವಹಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. 

ಕಾರ್ಯಕ್ರಮದಲ್ಲಿ ಶ್ರೀಕುವೆಂಪುರವರ ವಿಚಾರ ಕ್ರಾಂತಿಗೆ ಆಹ್ವಾನ ಕೃತಿಯನ್ನು ಚರ್ಚೆಗೆ ಆಯ್ದುಕೊಂಡು ಕೃತಿಯ ವಿವಿಧ ಭಾಗಗಳನ್ನು  ಓದಿ ಸಂವಾದಿಸಲಾಯಿತು. ಸಂವಾದದಲ್ಲಿ ರಜನಿಕಾಂತ್ ಎಚ್. ಪಟಗಾರ, ಗೌತಮ್ ಗೌಡ, ಅನನ್ಯ ಎಚ್, ಸೋಮೇಶ್ ಪ್ರಚಂಡಿ, ಅಂಬಿಕ ಬೆಂಗಳೂರು, ವಿಕಾಸ್ ಕನ್ನಸಂದ್ರ, ಛಾಯಾ ಕೆ ಉಪಾಧ್ಯ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿದ್ದ  ಶ್ರೀಮತಿ ಕಲಾವತಿ ಮಧುಸೂದನ ಇವರು ಮಾತನಾಡುತ್ತಾ ಕುವೆಂಪುರವರ ಪುಸ್ತಕ ಓದು ಸಾಹಿತ್ಯಾಸಕ್ತರ, ವಿಚಾರಾಸಕ್ತರ ಪಾಲಿಗೆ ಹಬ್ಬದ ವಾತಾವರಣವಿದ್ದಂತೆ. ಪುಸ್ತಕದ ಓದು ಚರ್ಚೆ ಸಂವಾದಗಳು ಒಂದು ಪುಸ್ತಕವನ್ನು ಬಹುಮುಖವಾಗಿ ನೋಡುವುದನ್ನು ಕಲಿಸುತ್ತವೆ. ಕುವೆಂಪುರವರ, ವಿವೇಕಾನಂದರ ಆಶಯ ಯುವಕರು ಜಾಗೃತರಾಗಬೇಕು, ಸಾಹಿತ್ಯ, ದೇಶಸೇವೆ, ವೈಚಾರಿಕತೆಗಳಲ್ಲಿ ಯುವಕರು ಮುಂದಿರಬೇಕು ಎಂಬುದೇ ಅಗಿತ್ತು. ಈದಿನ ಇವರ ಆಶಯಗಳು ಸಾಕಾರವಾಗುವತ್ತ ಸಾಗಿವೆ ಎನಿಸುತ್ತಿದೆ.  ಇಂತಹ ಕಾರ್ಯಕ್ರಮವನ್ನು ಸಾಧ್ಯವಾಗಿಸಿದ ವಿಚಾರ ಮಂಟಪ ಸಾಹಿತ್ಯ ವೇದಿಕೆ ಇಂತಹಾ ನೂರಾರು ಕಾರ್ಯಕ್ರಮಗಳನ್ನು ಮಾಡುವಂತಾಗಲಿ.  ಕುವೆಂಪುರವರ ವಿಚಾರಗಳು, ಅವರ ಪೂರ್ಣದೃಷ್ಠಿ, ಸ್ವಾಮಿ ಶಿವಾನಂದರ ಜೀವನ ವಿಚಾರ ಮುಂತಾದವನ್ನು ವಿವರವಾಗಿ ಚರ್ಚಿಸಿದ್ದೀರಿ  ಇವರ ವಿಚಾರಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರಯತ್ನ ಮುಂದೆ ಸಾಗಲಿ. ಕುವೆಂಪು ಅವರ ಅಸಾಧರಣ ಸೃಷ್ಟಿಶೀಲತೆ, ಕಲಾವಿದನ ಚೈತನ್ಯ, ವೈಚಾರಿಕತೆ, ವಿಮರ್ಶನ ಪ್ರಜ್ಞೆ ಇವುಗಳು ಅವರನ್ನು ಸಂಸ್ಕೃತಿಯ ಬೋಳುತನದಿಂದ ಪಾರುಮಾಡಿವೆ. ಹೀಗಾಗಿ ಅವರು ಭಾರತೀಯ ಸಂಸ್ಕೃತಿಯ ಮೂಲಭೂತ ಪ್ರವೃತ್ತಿಗಳನ್ನು ಅರಿಗಿಸಿಕೊಂಡು ಹೊಸ ಬೆಳಕನ್ನ ಉಂಟುಮಾಡಿದರು. ಆಚಾರದಲ್ಲಿರುವ ಸಂಸ್ಕೃತಿಗೆ ಹಳೆ ಉಡುಪನ್ನು ತೊಡೆದುಹಾಕಿ ವಿಚಾರದ ಹೊಸ ಉಡುಪನ್ನು ತೊಡಿಸಿದರು. ಯಜಮಾನ್ಯ ಸಂಸ್ಕೃತಿಯ ವಿರೋಧಿಯಾದ ಕುವೆಂಪು ಇದರ ಪ್ರತೀಕವಾದ  ಮಠ ಮಾನ್ಯ  ದೇವರು ದೇವಸ್ಥಾನ ಜಾತಿ ಮತ ಇತ್ಯಾದಿಗಳನ್ನು ನಿರಾಕರಿಸಿದವರು. ತಮ್ಮ ಪ್ರಕರ ವೈಚಾರಿಕತೆಯ ಮೂಲಕ ಯಜಮಾನ್ಯ ಸಂಸ್ಕೃತಿಯ ಎಲ್ಲಾ ರೀತಿಯ ಶೋಷಣೆಗಳನ್ನು ವಿರೋಧಿಸಿದರು. ನೂರು ದೇವರುಗಳನ್ನೆಲ್ಲಾ ನೂಕಾಚೆ ದೂರ, ಗುಡಿ ಚರ್ಚು ಮಸೀದಿಗಳನ್ನು ಬಿಟ್ಟು ಹೊರ ಬನ್ನಿ ಎಂದು ಯುವಜನರಿಗೆ ಕ್ರಾಂತಿಯ ಕರೆ ನೀಡಿದರು. ಇವರದ್ದು ಭಾರತೀಯ ಸಂಸ್ಕೃತಿಯ ಅಂಧಾನುಕರಣೆಯಾಗಿರಲಿಲ್ಲ. ಇವರ ಪರಿಧಿಗೆ ಬರುವ ಎಲ್ಲಾ ವಿಚಾರಗಳನ್ನು ವೈಚಾರಿಕವಾಗಿ ನೋಡುವ ಪ್ರಯತ್ನ ಇವರದ್ದು. ವೈದಿಕ ಪರಂಪರೆಯ ಜಡ ನಿಲುವುಗಳನ್ನು ವಿರೋಧಿಸುತ್ತಲೇ ತನ್ನ ಕಾಲದ ಎಲ್ಲ ವೈಚಾರಿಕ ಅವೈಶ್ಯಕತೆಗಳನ್ನು ಪೂರೈಸುತ್ತಿದ್ದವರು ಕುವೆಂಪು ಇವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ  ಎಂದು ಹೇಳುತ್ತಾ ತಮ್ಮ ಮಾತನ್ನು ಮುಗಿಸಿದರು.   
 
ಶ್ರೀ ವರುಣ್ ರಾಜ್ ಜಿ. ವಿಚಾರ ಮಂಟಪ ಸಾಹಿತ್ಯ ವೇದಿಕೆ ಸಂಸ್ಥಾಪಕರು, ಇವರು ಮಾತನಾಡುತ್ತಾ ಒಂದು ವರ್ಷದ ಅವಧಿಯಲ್ಲಿ ಒಟ್ಟು ೨೫ ಸರಣಿ ಪುಸ್ತಕ ಓದು - ಸಂವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವ ಜನರಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಹೆಚ್ಚಿಸುವ, ಪುಸ್ತಕ ಓದಿಗೆ ಪ್ರೇರೇಪಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಪ್ರತಿ ಕಾರ್ಯಕ್ರಮದಲ್ಲಿ ಸಂವಿದಾನ ಓದು ಪುಸ್ತಕದ ಕೆಲವು ಪುಟಗಳ ಚರ್ಚೆ ಮತ್ತು ಅಯ್ದ ಪುಸ್ತಕದ ಚರ್ಚೆಯನ್ನು ಮುಂದುವರೆಸಲಾಗುವುದು ಇದಕ್ಕೆ ಎಲ್ಲರೂ ಸಹಕರಿಸಬೇಕೆಂದು ಕೋರುತ್ತಾ ಓದು ಅಭಿಯಾನದ ಸಂಚಾಲಕರಾದ ಶ್ರೀ ಗೌತಮ್ ಗೌಡ ಸೇರಿದಂತೆ ಸಹಕರಿಸಿದ  ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದ ಶ್ರೀ ಫಯಾಜ್ ಅಹಮದ್ ಖಾನ್ ಇವರು ಮಾತನಾಡುತ್ತಾ ಇಂದಿನ‌ ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಿ ಯಶಸ್ವಿಯಾಗಿ ಮುಗಿದಿರುವುದು ಬಹಳ ಸಂತೋಷದ ವಿಚಾರ. ಇಂದು ಚರ್ಚಿಸಲಾದ ಪುಸ್ತಕದ ಹಲವು ವಿಚಾರಗಳು ಇಂದಿನ ರಾಜಕೀಯ ಸಾಮಾಜಿಕ ಪರಿಸ್ಥಿತಿಗಳಿಗೆ ಕನ್ನಡಿ ಹಿಡಿದಂತಿವೆ. ಈ ವಿಚಾರಗಳು ಇಂದು ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾದವು. ಸ್ವಾಮಿ ವಿವೇಕಾನಂದರ ಜೀವನಾದರ್ಶಗಳನ್ನು ಕುವೆಂಪುರವರ ಬದುಕು ಮತ್ತು ಬರಹಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ನಮ್ಮ ಜೀವನವನ್ನ ವೈಚಾರಿಕ ಪ್ರಜ್ಞೆಯ ಮೂಲಕ ನಡೆಸುವುದಕ್ಕೆ ಇವರ ಚಿಂತನೆಗಳು ನಮ್ಮನ್ನು ಪ್ರೇರೇಪಿಸುತ್ತವೆ. ಈ ಜಗತ್ತು ಒಂದು ದೊಡ್ಡ ಮಾನವ ಸಮಾಜ. ಅದರ ಹಿತ ಕೇವಲ ಸರ್ವೋದಯದಿಂದ ಮಾತ್ರ ಸಾಧ್ಯ. ಸರ್ವೋದಯದ ಮೂಲ ಮಂತ್ರವೇ ಆಧ್ಯಾತ್ಮ ಎಂಬ ವಿವೇಕಾನಂದರ ನಿಲುವೇ ಕುವೆಂಪು ಅವರದ್ದು ಸಹಾ.

ದೇಶದ ಗೌರವಕ್ಕೆ, ಜನರ  ಸಾಮರಸ್ಯಕ್ಕೆ ಚ್ಯುತಿ ತರುವ ಸಾಹಿತ್ಯ ಅದು ಸಾಹಿತ್ಯವಲ್ಲ. ಜಾತಿರಹಿತ, ಮತರಹಿತ, ಸಮಾನತೆಯ ಸಮಾಜವನ್ನು  ಸೃಷ್ಟಿಸುವ ಇಂತಹ ಸಾಹಿತ್ಯವನ್ನು ಕೃತಿಗಳನ್ನು ಓದುವ ಅಳವಡಿಸಿಕೊಳ್ಳುವ ಅವಶ್ಯಕತೆ ಇದೆ.  ಇಂತಹಾ ಕಾರ್ಯಕ್ರಮಗಳು ಹೀಗೆ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.  ಕಾರ್ಯಕ್ರಮದಲ್ಲಿ  ೩೦ ಕ್ಕೂ ಹೆಚ್ಚು ಜನ  ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.

- ವರದಿ : ಗೌತಮ್ ಗೌಡ.

(ಪುಸ್ತಕ ಓದು ಚರ್ಚೆಯಲ್ಲಿ ಭಾಗವಹಿಸುವ, ಪುಸ್ತಕ ಓದುವ ಆಸಕ್ತಿ ಉಳ್ಳವರು ದಯಮಾಡಿ ವಾಟ್ಸಪ್ ಮೂಲಕ 9902649766 ಸಂಪರ್ಕಿಸಿ ಅಭಿಯಾನಕ್ಕೆ ನೊಂದಣಿ ಮಾಡಿಕೊಳ್ಳಿ)


(ಸಾಹಿತ್ಯ ಸುದ್ದಿಗಳ ಪ್ರಕಟಣೆಗಾಗಿ ಸಂಪರ್ಕಿಸಿ 9448713659 ವಾಟ್ಸಪ್ ಮಾತ್ರ)

Comments

  1. ಸವಿವರವಾದ ಅತ್ಯುತ್ತಮ ವರದಿಗಾಗಿ ಅಭಿನಂದನೆಗಳು ಸರ್👌👍🌹🌴

    ReplyDelete
  2. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು 💐🙏

    ReplyDelete
  3. ಅದ್ಭುತ ಕಾರ್ಯಕ್ರಮ. ಶುಭಾಶಯಗಳು

    ReplyDelete
  4. ಅದ್ಬುತ ವಾದ ಕಾರ್ಯಕ್ರಮ ಇಗೆ ಇನ್ನೂ ಹೆಚ್ಚಿನ ಕಾರ್ಯಕ್ರಮಗಳು ನಡೆಯಲಿ ಯುವ ಸಾಹಿತಿ ಮತ್ತು ಕವಿಗಳು ಬೆಳೆಯಲಿ ಆಫ್ಲೈನ್ ಮೊಡೆನಲ್ಲಿ ಮಾಡಿ

    ReplyDelete

Post a Comment

Popular posts from this blog

ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಕರ್ನಾಟಕ ಸಾಂಸ್ಕೃತಿಕ ವೈಭವ ಕಾರ್ಯಕ್ರಮ.

ತುಮಕೂರಿನಲ್ಲಿ ಕವಿಗೋಷ್ಠಿ ಹಾಗೂ ಪುಸ್ತಕ ಓದು ಸಂವಾದ ಕಾರ್ಯಕ್ರಮ.

ಕಾವ್ಯದೀವಿಗೆ ಕೃತಿ ಲೋಕಾರ್ಪಣೆ