ಭಾಷೆಯಲ್ಲಿ ಗಟ್ಟಿತನವಿದ್ದರೆ ಕಾವ್ಯ ಗಟ್ಟಿಯಾಗುತ್ತದೆ ; ಲಲಿತಾ ಸಿದ್ಧಬಸವಯ್ಯ ಅಭಿಮತ.
ತುಮಕೂರು: ಕವಿ ತನ್ನ ಓದುಗರನ್ನು ಮನಸ್ಸಿನಲ್ಲಿಟ್ಟುಕೊಂಡು ಬರೆಯಬೇಕು. ಭಾಷೆಯಲ್ಲಿ ಗಟ್ಟಿತನವಿದ್ದರೆ ಮಾತ್ರ ಕಾವ್ಯ ಗಟ್ಟಿಯಾಗುತ್ತದೆ ಎಂದು ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅಭಿಪ್ರಾಯಪಟ್ಟರು. ನಗರದ ಓಶೋ ಧ್ಯಾನ ಕೇಂದ್ರದಲ್ಲಿ ಭಾನುವಾರ ಕರ್ನಾಟಕ ಲೇಖಕಿಯರ ಸಂಘ ತುಮಕೂರು ಹಾಗೂ ಸಾಕ್ಷಿ ಪ್ರಕಾಶನ ಇವರ ಸಹಯೋಗದಲ್ಲಿ ನಡೆದ ಕವಯತ್ರಿ ಲಲಿತಾ ಸಿದ್ಧಬಸವಯ್ಯ ಅವರೊಂದಿಗೆ ಸಂವಾದ ಹಾಗೂ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕವಿ ಅನುಭವ ಪ್ರಾಮಾಣಿಕನಾಗಿದ್ದರೆ ಅವನಿಗೆ ಪದಗಳನ್ನು ಹುಡುಕುವ ಕಷ್ಟವೇ ಇರುವುದಿಲ್ಲ. ಪದಗಳು ತಾವೇ ಕವಿಯನ್ನು ಹುಡುಕಿಕೊಳ್ಳುತ್ತವೆ. ಕವಿ ಹೆಚ್ಚು ಹೆಚ್ಚು ಓದುವುದರಿಂದ ಪದ ಸಂಪತ್ತು ಬೆಳೆಯುತ್ತದೆ. ನಮ್ಮ ಸುತ್ತಮುತ್ತ ಇದ್ದ ಮಹಿಳೆಯರೆಲ್ಲ ಗಟ್ಟಿಗಿತ್ತಿಯರೇ, ದಿಟ್ಟರಲ್ಲಿ ದಿಟ್ಡೆಯಾದವಳು ನನ್ನ ತಾಯಿ. ಇವರ್ಯಾರು ಸ್ತ್ರೀವಾದವನ್ನು ಮಾತನಾಡಲಿಲ್ಲ, ಆದರೆ ಸ್ತ್ರೀವಾದವನ್ನು ಜೀವಿಸಿದ್ದರು. ಅವರೇ ನನ್ನ ಕಾವ್ಯಕ್ಕೆ ಸ್ಪೂರ್ತಿ ಎಂದರು. ಕಾರ್ಯಕ್ರಮದ ಸಂಚಾಲಕಿ ಡಾ. ಆಶಾರಾಣಿ ಬಗ್ಗನಡು ಮಾತನಾಡಿ ಮಾತು ಮಾರೆಯಾಗುತ್ತಿರುವ ದುರಿತ ಕಾಲದಲ್ಲಿ ನಮ್ಮನಮ್ಮ ಚಿಂತನೆಗಳನ್ನು ಗಟ್ಟಿಗೊಳಿಸಿಕೊಳ್ಳಲು ಸಂವಾದಗಳು ಅತ್ಯಂತ ಅಗತ್ಯ. ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅತ್ಯಂತ ಮಹತ್ವದ ಸ್ಥಾನವನ್ನು ಹೊಂದಿರುವ, ಲಲಿತಾ ಸಿದ್ಧಬಸವಯ್ಯನವರು ತಮ್ಮ...